ವೆಸೇಲಿಯಸ್, ಆ್ಯಂಡ್ರಿಯಾಸ್
	1514-64. ಬೆಲ್ಜಿಯಮ್‍ನ ಅಂಗ ರಚನಾವಿಜ್ಞಾನಿ (ಅನಾಟಮಿಸ್ಟ್). ಮಾನವದೇಹದ ಅಂಗಛೇದನೆಗೆ ತೊಡಗಿದ ಮೊದಲಿಗರ ಪೈಕಿ ಒಬ್ಬ. ಬ್ರಸ್ಸೆಲ್ಸ್‍ನಲ್ಲಿ ಜನನ. ಪ್ಯಾರಿಸ್, ಲೊವೇನ್ ಮತ್ತು ಪದುವಾಗಳಲ್ಲಿ ವೈದ್ಯಕೀಯ ಕಲಿತು ಪದವೀಧರ ನಾದ. ಪದುವಾ ವಿಶ್ವವಿದ್ಯಾಲಯದಲ್ಲಿ ಶಸ್ತ್ರಚಿಕಿತ್ಸಾಪ್ರಾಧ್ಯಾಪಕನಾಗಿ ನೇಮಕಗೊಂಡ. ಬಲುಮಟ್ಟಿಗೆ ಗೇಲೆನ್ (ಸು. 130-201, (ನೋಡಿ- ಗೇಲೆನ್)) ಪಂಥಾನುಯಾಯಿಯಾಗಿದ್ದ ಈತ ಅಂಗಛೇದನ ಕುರಿತು ಆರು ಕೋಷ್ಠಕಗಳನ್ನು ಪ್ರಕಟಿಸಿದ (1538). ಗೇಲೆನ್‍ನ ಸಂಪೂರ್ಣ ಕೃತಿಗಳನ್ನು ಸಂಪಾದಿಸಿದ ಕೂಡ (1541). ಅಂಗಛೇದನ ಪ್ರಕ್ರಿಯೆಯಲ್ಲಿ ಸರ್ವಂಕಷವಾಗಿ ಮುನ್ನಡೆದಂತೆ, ಗೇಲೆನ್‍ನಿಂದ ಪಾರಂಪರಿಕವಾಗಿ ಬಂದಿದ್ದ ವೈದ್ಯಕೀಯ ಬೋಧನೆಗಳಲ್ಲಿ ನುಸುಳಿದ್ದ ಅನೇಕ ಲೋಪದೋಷಗಳು ಇವನ ಲಕ್ಷ್ಯಕ್ಕೆ ಬಂದುವು. ಉದಾಹರಣೆಗೆ ಗುಂಡಿಗೆಯ ಹೃತ್ಕುಕ್ಷಿಗಳ (ವೆಂಟ್ರಿಕಲ್ಸ್) ಮೂಲಕ ರಕ್ತ ಪ್ರವಹಿಸಲು ಹಾದಿ ಇದೆಯೆಂದು ಗೇಲೆನ್ ಭಾವಿಸಿದ್ದ. ಆದರೆ ಅಂಥ ಯಾವ ಹಾದಿಯನ್ನೂ ತಾನು ಕಾಣಲಿಲ್ಲ ಎಂದು ವೆಸೇಲಿಯಸ್ ದೃಢಪಡಿಸಿದ. ಮಾನವ ದೇಹರಚನೆಯ ಬಗ್ಗೆ (1543) ಎಂಬುದು ಈತನ ಮೇರುಕೃತಿ (ಲ್ಯಾಟಿನ್ನಿನಲ್ಲಿ ರಚಿತ). ಸಮೃದ್ಧ ಮತ್ತು ಆಕರ್ಷಕ ಚಿತ್ರಗಳು ಇದರ ಉಪಯುಕ್ತತೆಯನ್ನು ವರ್ಧಿಸಿದುವು. 

	ಈ ಕೃತಿಯಲ್ಲಿಯ ಉತ್ಕøಷ್ಟ ವಿವರಣೆಗಳೂ ಮೂಳೆಗಳ ಹಾಗೂ ನರವ್ಯೂಹದ ಸ್ಪಷ್ಟ ಚಿತ್ರಗಳೂ ಇದನ್ನೊಂದು ಅಭಿಜಾತ ಆಕರಗ್ರಂಥ ವಾಗಿಸಿದುವು. ಅಲ್ಲದೇ ಮುಂದಿನ ಪೀಳಿಗೆಯಲ್ಲಿ ಅಂಗರಚನಾವಿಜ್ಞಾನ ಕುರಿತು ಕೃತಿರಚನಕಾರರಿಗೆ ಮಾರ್ಗದರ್ಶಿಯೂ ಆಯಿತು. ವೆಸೇಲಿಯಸ್ ಇದರಲ್ಲಿ ಮೊದಲಬಾರಿಗೆ ದೇಹದ ಅನೇಕ ಆಂತರಿಕ ರಚನೆಗಳನ್ನು ಚಿತ್ರಸಹಿತ ವಿವರಿಸಿದ್ದಾನೆ. ಉದಾಹರಣೆಗೆ ತಲಮಸ್-ಮಿದುಳಿನಲ್ಲಿ ನರಗಳು ಸಂಗಮಿಸುವ ಸ್ಥಳ. ಆದರೆ ಸಮಕಾಲೀನ ವೃತ್ತಿವಿದರ ವಿನಾ ಟೀಕೆಗಳಿಂದ ಪ್ರಾಯಶಃ ಮನನೊಂದು ವೆಸೇಲಿಯಸ್ ಪದುವಾ ತೊರೆದು ಸ್ಪೇನ್ ಚಕ್ರವರ್ತಿಯ ಆಸ್ಥಾನವೈದ್ಯನಾಗಿ ಸೇರಿದ. ಮುಂದೊಮ್ಮೆ ಜೆರೂಸಲೆಮ್ ಯಾತ್ರೆ ಮುಗಿಸಿ ಮರಳುತ್ತಿದ್ದಾಗ ಹಾದಿಯಲ್ಲೇ ಮಡಿದ.								
		*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ